In this special episode dedicated to World Day Against Child Labour Vasudeva Sharma, Executive Director, Child Rights Trust speaks with Rj Vijaya about the day.
ಜೂನ್ 12 ಜಾಗತಿಕ ಬಾಲಕಾರ್ಮಿಕ ಪದ್ಧತಿ ವಿರೋಧೀ ದಿನ. ಜಗತ್ತಿನಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಎಲ್ಲರ ಗಮನವನ್ನು ಸೆಳೆದು ಕ್ರಮ ಕೈಗೊಳ್ಳಲೆಂದೇ 2002ರಿಂದ ಈ ದಿನವನ್ನು ಗಮನಿಸಲಾಗುತ್ತಿದೆ.
ಜಗತ್ತಿನಲ್ಲಿ 15 ಕೋಟಿಗೂ ಹೆಚ್ಚು ಬಾಲಕಾರ್ಮಿಕರಿದ್ದು, ಇವರಲ್ಲಿ 71 % ಮಕ್ಕಳು ಕೃಷಿ ಕ್ಷೇತ್ರದಲ್ಲಿಯೂ 12 % ಕೈಗಾರಿಕೆ, ಗಣಿ ಕ್ಷೇತ್ರದಲ್ಲಿಯೂ 17 % ಸೇವಾಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ ಎಂದು ಐ.ಎಲ್. ಓ. – ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಹೇಳಿದೆ. ಇವರಲ್ಲಿ ಸುಮಾರು 7 ಕೋಟಿಯಷ್ಟು ಮಕ್ಕಳು ಅಪಾಯಕಾರಿ ಉದ್ದಿಮೆ/ಪರಿಸ್ಥಿತಿಯಲ್ಲಿ ದುಡಿಯುತ್ತಿದ್ದಾರೆ.
ಐ.ಎಲ್.ಓ. ಲೆಕ್ಕದಂತೆ ಭಾರತದಲ್ಲಿ ಒಂದು ಕೋಟಿಯಷ್ಟು ಮಕ್ಕಳು ದುಡಿಯುತ್ತಿದ್ದಾರೆ. ಅದರಲ್ಲೂ ಕೃಷಿ ಕ್ಷೇತ್ರದಲ್ಲೇ ಹೆಚ್ಚು.
ಈಗಿನ ಕೋವಿಡ್-19ರ ಸಮಯದಲ್ಲಿ ಶಾಲೆಯಿಲ್ಲ, ವಯಸ್ಕರಿಗೆ ದುಡಿಮೆಯಿಲ್ಲ, ಅನೇಕ ಉದ್ದಿಮೆಗಳು ಮುಚ್ಚಿವೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಬಹಳ ಸುಲಭವಾಗಿ ದುಡಿಮೆಗೆ ಎಳೆಯುವ ಶಕ್ತಿಗಳು ಕೆಲಸ ಮಾಡುತ್ತವೆ. ಕುಟುಂಬಗಳಿಗೂ ಇದು ಅನಿವಾರ್ಯ ಎನಿಸುವ ಸ್ಥಿತಿಗತಿ ಇದೆ.
ಇಂತಹ ಸಂದರ್ಭದಲ್ಲಿ ಹಿಂದೆಂದಿಗಿಂತಲೂ ಈಗ ಮಕ್ಕಳನ್ನು ಬಾಲಕಾರ್ಮಿಕ ಪದ್ಧತಿಗೆ, ಸಾಗಣೆ, ಮಾರಾಟಕ್ಕೆ ಗುರಿಯಾಗದಂತೆ ರಕ್ಷಿಸುವ ತುರ್ತು ನಮ್ಮೆಲ್ಲರ ಎದುರಿದೆ.
2021ನ್ನು ವಿಶ್ವಸಂಸ್ಥೆಯು ಅಂತಾರಾಷ್ಟ್ರೀಯ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆ ವರ್ಷ ಎಂದು ಗಮನಿಸಲು ನಿರ್ಧರಿಸಿದೆ. ಐ.ಎಲ್.ಓ. ಈ ಪ್ರಕ್ರಿಯೆಯನ್ನು ಮುನ್ನಡೆಸಲಿದೆ. ಸುಸ್ಥಿರ ಅಭಿವೃದ್ಧಿ ಗುರಿ 8.7ನ್ನು ಸಾಕಾರಗೊಳಿಸಲು ಮತ್ತು ಎಲ್ಲ ಕ್ಷೇತ್ರಗಳಲ್ಲಿ ಬಾಲಕಾರ್ಮಿಕ ಪದ್ಧತಿಯನ್ನು ಕೊನೆಗಾಣಿಸಲು ಇದೊಂದು ಮುಖ್ಯವಾದ ಅವಕಾಶವಾಗಲಿದೆ.